ಕೂಡಿಸುವ ಅಂಗಾಂಶ ರೋಗಗಳು

ಇವು ನಾನಾ ವಿಧವಾಗಿ ಮೈದೋರುತ್ತವೆ. ದೇಹದ ಯಾವ ಭಾಗದಲ್ಲಿಯಾದರೂ ಕಾಣಿಸಿಕೊಳ್ಳಬಹುದು. ಎಲ್ಲೆಂದರಲ್ಲಿ ಉರಿಯೂತಗಳುಂಟಾಗಬಹುದು. ಯಾವ ತರಹೆಯ ರೋಗಲಕ್ಷಣಗಳಾದರೂ ಕಾಣಿಸಿಕೊಳ್ಳಬಹುದು. ಈ ರೋಗಗಳಲ್ಲಿ ಮುಖ್ಯವಾಗಿ ಕೂಡಿಸುವ ಅಂಗಾಂಶಗಳು ಆಪತ್ತಿಗೆ ತುತ್ತಾಗುತ್ತವೆ. ಉದಾಹರಣೆಗೆ ರಕ್ತನಾಳಗಳು, ಹೃದಯ, ಕೀಲುಗಳು, ಮಾಂಸಖಂಡಗಳು, ಚÀರ್ಮ ಮತ್ತು ದೇಹದ ಮುಖ್ಯವಾದ ಅಂಗಾಂಗಳಿಗೆ ಸಹಾಯಕವಾಗಿ ನಿಲ್ಲುವ ಬಲೆಯಾಕಾರದ ಅಂಗಾಂಶಗಳು (ರೆಟಿಕ್ಯುಲರ್ ಟಿಷ್ಯೂಸ್) ತೊಂದರೆಗೊಳಗಾಗುತ್ತವೆ. ಈ ಕಾಯಿಲೆಗಳಲ್ಲಿ, ಮೂಲಭೂತವಾದ ಬದಲಾವಣೆ, ಕೂಡಿಸುವ ಅಂಗಾಂಶಗಳಲ್ಲಿ ಕಾಣಬರುತ್ತದೆ. ಇವುಗಳಲ್ಲಿ ನಾರುಗಡ್ಡೆಯ ಸವೆತ ತೋರುವುದು. ಕೂಡಿಸುವ ಅಂಗಾಂಶಗಳಲ್ಲಿ ಹಲವು ಜೀವರಸಾಯನ ಕಾರ್ಯಗಳಲ್ಲಿ ವೈಪರೀತ್ಯಗಳುಂಟಾಗಿ ಸ್ವಭಾವವ್ಯತಿರಿಕ್ತವಾದ ಕ್ರಿಯೆಗಳುಂಟಾಗುತ್ತವೆ. ಈ ಕಾಯಿಲೆಗಳಿಗೆ ನಿರ್ದಿಷ್ಟವಾದ ಯಾವ ಕಾರಣವೂ ತಿಳಿದು ಬಂದಿಲ್ಲ; ಒಗ್ಗದಿಕೆ ಒಂದು ಕಾರಣವಾಗಿರಬಹುದೆಂದು ಕೆಲವು ವಿಜ್ಞಾನಿಗಳ ಊಹೆ.

	ರೋಗಲಕ್ಷಣಗಳು ಕಾಯಿಲೆಯಿಂದ ಕಾಯಿಲೆಗೆ ವ್ಯತ್ಯಾಸಗೊಳ್ಳುತ್ತ ಹೋಗುತ್ತವೆ. ಕೀಲುಗಳು, ಸ್ನಾಯುರಜ್ಜುವಿನ ಕೋಶ(ಟೆಂಡನ್ ಷೀತ್) ಹೃದಯ ಮತ್ತು ರಕ್ತನಾಳಗಳು ಸಾಮಾನ್ಯವಾಗಿ ಎಲ್ಲ ಕಾಯಿಲೆಗಳಲ್ಲಿಯೂ ತೊಂದರೆಗೊಳಗಾಗುತ್ತವೆ.

	ಈ ಮುಂದಿನ ಕಾಯಿಲೆಗಳು ಕೂಡಿಸುವ ಅಂಗಾಂಶರೋಗದ ಗುಂಪಿಗೆ ಸೇರಿವೆ; ಸ್ಕ್ಲೀರೋಡರ್ಮ, ಡರ್ಮೆಟೊ ಮಯೊಸೈಟಿಸ್, ಟೆಂಪೊರಲ್ ಆರ್ಟಿರೈಟಿಸ್, ರೂಮೆಟಾಯಿಡ್ ಆರ್ತ್‍ರೈಟಿಸ್, ರ್ಹೂಮ್ಯಾಟಿಕ್ ಫೀವರ್, ಸೀರಂ ಸಕ್‍ನೆಸ್.

 (ಎ.ಎಸ್.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ